ಸಾರಾಂಶ

ಇಂಗ್ಲಿಷ್ ಭಾಷೆಯಲ್ಲಿ ಉಪಯೋಗದಲ್ಲಿರುವ ಅಡಿossತಿoಡಿಜ ಠಿuzzಟe ಎಂಬ ಶಬ್ದಕ್ಕೆ ಕನ್ನಡದಲ್ಲಿ ಮಾಡಿಕೊಂಡಿರುವ 'ಪದಬಂಧ' ಎಂಬ ಮಾತು ಈಗ ತುಂಬಾ ಪ್ರಚಾರದಲ್ಲಿದೆ. ನಿಜವಾಗಿ ಇದು ಒಂದು ಸಮಸ್ಯೆಯ ಪ್ರಪಂಚ. ಇದರಲ್ಲಿ ಮೇಲಿನಿಂದ ಕೆಳಕ್ಕೆ ೯, ೧೦ ಅಥವ ೧೧ ಮನೆಗಳು, ಅಡ್ಡಡ್ಡಲಾಗಿ ಅಷ್ಟೇ ಸಂಖ್ಯೆಯ ಮನೆಗಳು ಇರುತ್ತವೆ. ಆ ಮನೆಗಳಲ್ಲಿ ನಿಯಮಬದ್ಧವಾಗಿ ಕೆಲವು ಮನೆಗಳನ್ನು ಬಿಟ್ಟು ಮಿಕ್ಕ ಮನೆಗಳಲ್ಲಿ ಮೇಲಿನಿಂದ ಕೆಳಕ್ಕೂ, ಅಡ್ಡಡ್ಡಲಾಗಿಯೂ ಶಬ್ದಗಳನ್ನು ಸೇರಿಸಬೇಕು. ಈ ಶಬ್ದಗಳನ್ನು ಆರಿಸಿಕೊಳ್ಳಲು ಎರಡು ಕಡೆಗಳಿಗೂ ಸೂಕ್ತವಾದ ಸೂಚನೆಗಳಿರುತ್ತವೆ. ಆ ಸೂಚನೆಯ ಬೆನ್ನು ಹತ್ತಿ ಓದುಗರು ಸರಿಯಾದ ಪದಗಳನ್ನು ಹುಡುಕಿ ಆ ಮನೆಗಳಿಗೆ ತುಂಬ ಬೇಕು.

ಅ.ನಾ.ಪ್ರಹ್ಲಾದರಾವ್ ಅವರು ಸಿದ್ಧಪಡಿಸಿರುವ ಈ ಪುಸ್ತಕದಲ್ಲಿ ಸುಮಾರು ೧೬೮ ಪದಬಂಧಗಳು ಅಡಕಗೊಂಡಿವೆ. ಪ್ರತಿಯೊಂದರಲ್ಲಿಯೂ ಓದುಗರಿಗೆ ಆಸಕ್ತಿ ಹುಟ್ಟಿಸುವ ಸಮಸ್ಯೆಗಳಿವೆ. ಇಲ್ಲಿಯವರೆಗೂ ಕನ್ನಡದಲ್ಲಿ ಇಂಥ ಒಂದು ಪುಸ್ತಕ ಬಂದಿರಲಿಲ್ಲ. ಇದೇ ಮೊದಲ ಪುಸ್ತಕ. ಇದನ್ನು ಸಿದ್ಧಪಡಿಸಿರುವ ಶ್ರೀ ಪ್ರಹ್ಲಾದರಾವ್ ಅವರು ಕನ್ನಡದ ಬಹುಪಾಲು ಪತ್ರಿಕೆಗಳಿಗೆ ಕಳೆದ ೨೩ ವರ್ಷಗಳಿಂದ ಪದಬಂಧಗಳನ್ನು ರಚಿಸುತ್ತಾ ಬಂದಿದ್ದಾರೆ. ಇವರು ಬಹಳ ಶ್ರಮ ವಹಿಸಿ ಈ ಸುಂದರ ಸಮಸ್ಯಾ ಪ್ರಪಂಚವನ್ನು ಸಿದ್ಧಪಡಿಸಿದ್ದಾರೆ.

ಪ್ರೊ. ಜಿ. ವೆಂಕಟಸುಬ್ಬಯ್ಯ

(ಮುನ್ನುಡಿಯಿಂದ)

ಪದಬಂಧ
ಲೇಖಕರು:
ಪ್ರಹ್ಲಾದರಾವ್ ಅ.ನಾ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/6 ಡೆಮಿ
ಮುದ್ರಣ:
2007
ರಕ್ಷಾಪುಟ:
ಆರ್ಟ್ಫೋಕಸ್
ಪುಟಗಳು:
194
ಬೆಲೆ:
100 ರೂ.
ಲೇಖಕರ ಪರಿಚಯ
ಅ.ನಾ. ಪ್ರಹ್ಲಾದರಾವ್ ಅವರು ಹುಟ್ಟಿದ್ದು ೧೯೫೩ರಲ್ಲಿ. ಊರು ಕೋಲಾರ ತಾಲ್ಲೂಕಿನ ಅಬ್ಬಣಿ. ತಂದೆ ಎ. ಆರ್. ನಾರಾಯಣರಾವ್, ತಾಯಿ ಕಾವೇರಮ್ಮ. ಅಬ್ಬಣಿ, ಬಿದರಹಳ್ಳಿ, ಬೆಂಗಳೂರು ಹಾಗೂ ಕೋಲಾರದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಮೊದಲು ಪತ್ರಿಕೋದ್ಯಮಿಯಾಗಿ ವೃತ್ತಿ ಆರಂಭಿಸಿ ನಂತರ ವಾರ್ತಾ ಇಲಾಖೆಗೆ ಸೇರಿ ಮುಖ್ಯಮಂತ್ರಿಗಳ ಕಚೇರಿಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ೨೦೧೩ರ ಜುಲೈನಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ನಿವೃತ್ತರಾದರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅ.ನಾ. ಪ್ರಹ್ಲಾದರಾವ್ ಕನ್ನಡ ಪದಬಂಧಗಳ ರಚನೆಯಲ್ಲಿ ದೊಡ್ಡ ಹೆಸರು. ಸುಮಾರು ೪೦,೦೦೦ ಪದಬಂಧಗಳು ಪ್ರಹ್ಲಾದರಾವ್ ಅವರ ಚಿಂತನಾಮೂಸೆಯಿಂದ ಮೂಡಿಬಂದಿವೆ. ಲೇಖಕರಾಗಿಯೂ ಹೆಸರಾಗಿರುವ ಅ.ನಾ. ಪ್ರಹ್ಲಾದರಾವ್ ಅವರ ಕೃತಿಗಳು: ರಘುಸುತರ ನಾಟಕಗಳು (ವಿಮರ್ಶೆ), ಪುರಸ್ಕಾರ (ಚಲನಚಿತ್ರ ಪ್ರಶಸ್ತಿಗಳನ್ನು ಕುರಿತು), ಬಂಗಾರದ ಮನುಷ್ಯ (ಡಾ. ರಾಜಕುಮಾರ್ ಜೀವನ ಚರಿತ್ರೆ), ನಿಸಾರೋಕ್ತಿಗಳು (ಸಂಪಾದನೆ), ಮಳೆನೀರು ಸಂರಕ್ಷಣೆ (ಜಲಮಂಡಳಿ ಪ್ರಕಟಣೆ), ಬೆಳ್ಳಿತೆರೆ ಬೆಳಗಿದವರು (ಚಲನಚಿತ್ರ ದಿಗ್ಗಜರನ್ನು ಕುರಿತು), ರಾಜಕುಮಾರ್ : ದಿ ಇನಿಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್ (‘ಬಂಗಾರದ ಮನುಷ್ಯ’ ಕೃತಿಯ ಆಂಗ್ಲ ಅವತರಣಿಕೆ), ಡಾ. ರಾಜ್ಕುಮಾರ್, ಟಿ.ಎಸ್. ಕರಿಬಸಯ್ಯ, ಶಾಂತಾ ಹುಬ್ಳಿಕರ್, ಪದಬಂಧದ ೫ ಪ್ರತ್ಯೇಕ ಪುಸ್ತಕಗಳು, ಪ್ರಾಣಪದಕ (ಶ್ರೀಮತಿ ಪಾರ್ವತಮ್ಮನವರ ದೃಷ್ಟಿಯಲ್ಲಿ ಡಾ. ರಾಜಕುಮಾರ್), ನನ್ನ ವಿಭಿನ್ನದಾರಿ - ರಜನಿಕಾಂತ್. ಜೊತೆಗೆ ಪದಲೋಕ, ಪದಕ್ರೀಡೆ. ಅಲ್ಲದೆ, ಹಿರಿಯ ಐ.ಎ.ಎಸ್. ಅಧಿಕಾರಿ ಕೆ. ಜೈರಾಜ್ ಅವರ ಆಡಳಿತ ಅನುಭವಗಳನ್ನು ಜೈತ್ರಯಾತ್ರೆ ಕೃತಿಯ ಮೂಲಕ ಅನಾಪ್ರ ಕಟ್ಟಿಕೊಟ್ಟಿದ್ದಾರೆ. ಇವರು ಬರೆದ ಒಂಭತ್ತು ಭಾವಗೀತೆಗಳ ಸಿ.ಡಿ. ವಸಂತ ಮಲ್ಲಿಕಾ ೨೦೦೮ರಲ್ಲಿ ಬಿಡುಗಡೆಗೊಂಡಿದೆ. ಅ.ನಾ. ಪ್ರಹ್ಲಾದರಾವ್ ಅವರಿಗೆ ಸಂದಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳಲ್ಲಿ ಕೆಲವೆಂದರೆ ‘ಪ್ರಜಾರತ್ನ’, ‘ಪದಬಂಧಬ್ರಹ್ಮ’, ‘ಪದಬಂಧ ಸಾಮ್ರಾಟ್’ ಮೊದಲಾದ ಬಿರುದುಗಳು; ‘ವಿಶ್ವೇಶ್ವರಯ್ಯ ಪ್ರಶಸ್ತಿ’, ‘ಕರ್ನಾಟಕ ವಿಭೂಷಣ ಪ್ರಶಸ್ತಿ’, ‘ಆರ್ಯಭಟ ಪ್ರಶಸ್ತಿ’, ‘ಕೆಂಪೇಗೌಡ ಪ್ರಶಸ್ತಿ’, ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಸದ್ಭಾವನ ಪ್ರಶಸ್ತಿ’ ಮೊದಲಾದ ಪ್ರಶಸ್ತಿ ಪುರಸ್ಕಾರಗಳು.