ಸಾರಾಂಶ

ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ 'ಪದಬಂಧ'. ಭಾಷಾ ಪ್ರೌಢಿಮೆ, ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ 'ಪದಬಂಧ'ದ ಇತಿಹಾಸ ಒಂದು ಶತಮಾನದ್ದು. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ. ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು ೧೯೧೩ರ ಡಿಸೆಂಬರ್ ೨೧ರ ಸಂಚಿಕೆಯಲ್ಲಿ. ಕ್ರಿಸ್ಮಸ್ ವಿಶೇಷಾಂಕದಲ್ಲಿ ಏನಾದರೊಂದು ವಿಶೇಷ ಅಳವಡಿಸಬೇಕೆಂದು ನಿರ್ಧರಿಸಿದ 'ದಿ ನ್ಯೂಯಾರ್ಕ್ ವರ್ಡ್' ಪತ್ರಿಕೆಯ ಸಂಪಾದಕ ಆರ್ಥರ್ ವಿನ್ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು 'ವರ್ಡ್ಕ್ರಾಸ್' ಎಂಬ ಅಂಕಣವನ್ನು ಸೃಷ್ಟಿಸಿದ. ನಂತರ, ಆ ಅಂಕಣ ಎಷ್ಟು ಜನಪ್ರಿಯವಾಯಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ಪುರವಣಿಗಳಲ್ಲಿ ಪ್ರಕಟಿಸಲೇಬೇಕಾದ ಅನಿವಾರ್ಯತೆಯುಂಟಾಯಿತು.
ವಿಶ್ವ ಇಂದು 'ಪದಬಂಧ ಶತಮಾನೋತ್ಸವ' ಆಚರಿಸುತ್ತಿರುವ ಸಂದರ್ಭದಲ್ಲಿ ಪತ್ರಕರ್ತರಾಗಿಯೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿಯೂ ಸೇವೆ ಸಲ್ಲಿಸಿರುವ ಅ.ನಾ.ಪ್ರಹ್ಲಾದರಾವ್ ಅವರ ಪದಬಂಧಗಳಿರುವ ಈ ಪುಸ್ತಕ ಹೊರಬರುತ್ತಿದೆ. ಅ.ನಾ.ಪ್ರಹ್ಲಾದರಾವ್ ಅವರು ಕನ್ನಡದ ವಿವಿಧ ನಿಯತಕಾಲಿಕೆಗಳಿಗಾಗಿ ೪೦,೦೦೦ ಪದಬಂಧಗಳನ್ನು ರಚಿಸಿದ್ದು, ಇದಕ್ಕಾಗಿ ಸುಮಾರು ೧೨ ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಬಹುಶಃ ಪ್ರಪಂಚದಲ್ಲಿ ಮೊದಲ 'ಪದಬಂಧ ಶತಮಾನೋತ್ಸವ' ಆಚರಿಸುತ್ತಿರುವ ಹೆಗ್ಗಳಿಕೆ ಕನ್ನಡಿಗರದು.
ಈ ಕೃತಿಯನ್ನು ನೀವು ತೆರೆಯುತ್ತಿದ್ದಂತೆ ಸ್ವಾರಸ್ಯಕರ ಸವಾಲುಗಳನ್ನು ಒಡ್ಡುತ್ತ ಕನ್ನಡದ ಶಬ್ದಸಂಪತ್ತಿಗೆ ಇರುವ ಅನೇಕ ಸಾಧ್ಯತೆಗಳನ್ನು ತೆರೆದುತೋರಿಸುತ್ತವೆ ಒಳಗಿನ ಪುಟಗಳು.

ಪದಲೋಕ
ಲೇಖಕರು:
ಅ.ನಾ. ಪ್ರಹ್ಲಾದರಾವ್
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2013
ರಕ್ಷಾಪುಟ:
ರಾಮ್ ಗೌತಮ್
ಪುಟಗಳು:
196
ಬೆಲೆ:
100 ರೂ.
ಲೇಖಕರ ಪರಿಚಯ
ಹೆಸರಾಂತ ಪದಬಂಧ ರಚನೆಕಾರರಾದ ಅ.ನಾ. ಪ್ರಹ್ಲಾದರಾವ್ ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ೧೯೫೩ರ ಜುಲೈ ೨೪ರಂದು ಜನಿಸಿದರು. ತಂದೆ ಎ.ಆರ್. ನಾರಾಯಣರಾವ್, ತಾಯಿ ಕಾವೇರಮ್ಮ. ಅಬ್ಬಣಿ, ಬೆಂಗಳೂರು, ಕೋಲಾರದಲ್ಲಿ ವ್ಯಾಸಂಗ ಮುಗಿಸಿ, ವಿಜ್ಞಾನ ಪದವೀಧರರಾದರು. ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಕೋಲಾರದಿಂದ ಪ್ರಕಟಗೊಳ್ಳುವ ‘ಕೋಲಾರ ಪತ್ರಿಕೆ‘ ದೈನಿಕದಲ್ಲಿ ಪತ್ರಕರ್ತರಾಗಿ ೧೯೭೫ರಲ್ಲಿ ವೃತ್ತಿ ಆರಂಭಿಸಿದರು. ‘ಹೊನ್ನುಡಿ’ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದರು. ೧೯೮೩ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸಿ ೨೦೧೩ರಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ನಿವೃತ್ತರಾದರು. ಪ್ರಸ್ತುತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿದ್ದಾರೆ. ಭಾರತದಲ್ಲಿಯೇ ಅತ್ಯಂತ ಹೆಚ್ಚು ಪದಬಂಧ ರಚನೆಕಾರರಾಗಿ ಅಂದರೆ ಮೂವತ್ತು ಸಾವಿರಕ್ಕೂ ಮಿಗಿಲಾಗಿ ಪದಬಂಧಗಳನ್ನು ರಚಿಸಿರುವ ಅಪರೂಪದ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿರುವ ಅ.ನಾ. ಪ್ರಹ್ಲಾದರಾವ್ ಅವರ ಹೆಸರು ೨೦೧೫ ಹಾಗೂ ೨೦೧೬ರ ‘ಲಿಮ್ಕಾ ಪುಸ್ತಕ’ಗಳಲ್ಲಿ ದಾಖಲೆಯಾಗಿದೆ. ಅ.ನಾ. ಪ್ರಹ್ಲಾದರಾವ್ ಕನ್ನಡದಲ್ಲಿ ಮೊದಲ ಬಾರಿಗೆ ಏಳು ಪದಬಂಧ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ೨೦೦೫ರಲ್ಲಿ ಡಾ. ರಾಜಕುಮಾರ್ ಜೀವನ ಸಾಧನೆ ಕುರಿತು ಅ.ನಾ. ಪ್ರಹ್ಲಾದರಾವ್ ಬರೆದ ‘ಬಂಗಾರದ ಮನುಷ್ಯ’ ಕೃತಿ ಬಿಡುಗಡೆ ಆಯಿತು. ಇವರು ರಚಿಸಿದ ‘ಬೆಳ್ಳಿತೆರೆ ಬೆಳಗಿತು’ ಕೃತಿ ೨೦೦೭ರ ಮೇ ತಿಂಗಳಿನಲ್ಲಿ ಬಿಡುಗಡೆ ಆಯಿತು. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ನೆನಪಿನಾಳದ ಸಂಗತಿಗಳನ್ನು ಒಳಗೊಂಡ ‘ಪ್ರಾಣಪದಕ’ ಹಾಗೂ ರಜನಿಕಾಂತ್ ಅವರನ್ನು ಕುರಿತ ‘ನನ್ನ ದಾರಿ ವಿಭಿನ್ನ ದಾರಿ’ ಪುಸ್ತಕಗಳನ್ನು ರಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾಗಿ ‘ರಾಜಕುಮಾರ್’ ಮತ್ತು ‘ಬಿ.ಎನ್. ಕರಿಬಸವಯ್ಯ’, ರಾಷ್ಟ್ರೋತ್ಥಾನ ಪರಿಷತ್ಗಾಗಿ ‘ಶಾಂತಾಹುಬ್ಳೀಕರ್’ ಪುಸ್ತಕಗಳನ್ನು ರಚಿಸಿದ್ದಾರೆ. ಅ.ನಾ.ಪ್ರ. ಅವರು ಕವಿಗಳೂ ಆಗಿದ್ದು ಅವರು ರಚಿಸಿರುವ ಭಾವಗೀತೆಗಳ ಕ್ಯಾಸೆಟ್ ‘ವಸಂತ ಮಲ್ಲಿಕಾ’ ಲೋಕಾರ್ಪಣೆಗೊಂಡಿದೆ. ನಿವೃತ್ತ ಐಎಎಸ್ ಅಧಿಕಾರಿ ಕೆ. ಜೈರಾಜ್ ಅವರ ಆಡಳಿತ ಅನುಭವಗಳ ‘ಜೈತ್ರಯಾತ್ರೆ’ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ‘ಪ್ರಜಾರತ್ನ’, ‘ಪದಬಂಧ ಬ್ರಹ್ಮ’, ‘ಪದಬಂಧ ಸಾಮ್ರಾಟ್’ ಮುಂತಾದ ಬಿರುದುಗಳನ್ನು ನೀಡಿವೆ. ‘ವಿಶ್ವೇಶ್ವರಯ್ಯ ಪ್ರಶಸ್ತಿ’, ‘ಆರ್ಯಭಟ’, ‘ಹಂಸರತ್ನ’, ‘ಬೆಂಗಳೂರು ರತ್ನ’, ಬೆಂಗಳೂರು ಮಹಾನಗರ ಪಾಲಿಕೆ ಕೊಡಮಾಡುವ ‘ಕೆಂಪೇಗೌಡ ಪ್ರಶಸ್ತಿ’ ಮೊದಲಾದ ಪ್ರಶಸ್ತಿಗಳು ಇವರಿಗೆ ಸಂದಿವೆ.